ಶೀಘ್ರದಲ್ಲೇ ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ

ಹೊಸದಿಲ್ಲಿ: ಲೋಕಸಭಾ ಚುನಾವಣೆ ದಿನಾಂಕ ಪ್ರಕಟಣೆಯ ಹಿನ್ನಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಮೊದಲ ಹಂತದ ದಿನಾಂಕಗಳನ್ನು ಪ್ರಕಟಿಸಲಾಗಿತ್ತು.

ಇದೀಗ ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗ ಘೋಷಿಸಿರುವ ಹಿನ್ನಲೆಯಲ್ಲಿ ಐಪಿಎಲ್‌ನ ಸಂಪೂರ್ಣ ದಿನಾಂಕಗಳನ್ನು ಬಿಡುಗಡೆಗೊಳಿಸಲು ಬಿಸಿಸಿಐ ಮುಂದಾಗಿದೆ.

ಬಲ್ಲ ಮೂಲಗಳ ಪ್ರಕಾರ ಮಾರ್ಚ್ 18 ಸೋಮವಾರದಂದು ಉಳಿದಿರುವ ಐಪಿಎಲ್ ವೇಳಾಪಟ್ಟಿಯು ಬಿಡುಗಡೆಯಾಗಲಿದೆ. ಈ ಹಿಂದೆ ಮೊದಲ ಹಂತವಾಗಿ ಮಾರ್ಚ್ 23ರಿಂದ ಎಪ್ರಿಲ್ 05ರ ವರೆಗಿನ 17 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು.

ಮಾರ್ಚ್ 23ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲನ್ನು ಎದುರಿಸಲಿದೆ.

ಪಶ್ಚಿಮ ಬಂಗಾಳದಲ್ಲಿ ಏಳು ಹಂತದ ಚುನಾವಣೆ ನಡೆಯಲಿರುವುದರಿಂದ ಕೋಲ್ಕತಾ ನೈಟ್ ರೈಡರ್ಸ್ ತವರಿನ ಪಂದ್ಯಗಳನ್ನು ಹೇಗೆ ನಿಭಾಯಲಿಸಲಿದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ವಾಡಿಕೆಯಂತೆ ಎಲ್ಲ ಫ್ರಾಂಚೈಸಿಗಳು ತಲಾ ಏಳು ಹೋಮ್ ಹಾಗೂ ಎವೇ ಪಂದ್ಯಗಳಲ್ಲಿ ಭಾಗವಹಿಸಬೇಕಿದೆ.